ಗ್ರಾಮ ಪುನರ್ರಚನೆ

	ಹಳ್ಳಿಗಳಲ್ಲಿರುವ ಎಲ್ಲ ಉತ್ತಮಾಂಶಗಳನ್ನು ಉಪಯೋಗಿಸಿಕೊಂಡು ಅಲ್ಲಿಯ ಜನ ಸಮೃದ್ಧ ಜೀವನ ನಡೆಸಲು ಅನುಕೂಲವಾಗುವಂತೆ ಮಾಡುವ ಕಾರ್ಯ. ಹಳ್ಳಿಗರ ಆರ್ಥಿಕ, ಬೌದ್ಧಿಕ ನೈತಿಕ - ಈ ಮೂರು ಬಗೆಯ ಅಭಿವೃದ್ಧಿ ಸಾಧಿಸುವುದು ಇದರ ಉದ್ದೇಶ.

	ವೈದ್ಯಕೀಯ ಸಹಾಯ ಒದಗಿಸುವುದು, ಗ್ರಾಮ ನೈರ್ಮಲ್ಯ ಸಾಧಿಸುವುದು, ಶುದ್ಧವಾದ ಕುಡಿಯುವ ನೀರನ್ನು ಒದಗಿಸುವುದು ಇವು ಗ್ರಾಮಸ್ಥರ ಆರೋಗ್ಯಸುಧಾರಣೆಗಾಗಿ ಕೈಗೊಳ್ಳಬೇಕಾದ ಕಾರ್ಯಕ್ರಮ. ಜೀವನಮಟ್ಟವನ್ನು ಹೆಚ್ಚಿಸಬೇಕಾದರೆ ಮುಖ್ಯವಾಗಿ ವ್ಯವಸಾಯದ ಅಭಿವೃದ್ಧಿ, ವ್ಯವಸಾಯಕ್ಕೆ ಪೂರಕವಾದ ಗೃಹ ಮತ್ತು ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಇವು ತ್ವರಿತವಾಗಿ ಸಾಧಿಸುವಂತೆ ಮಾಡುವುದು ಅವಶ್ಯಕ. ಹೆಚ್ಚು ಇಳುವರಿ ಕೊಡುವ ಬೀಜಗಳ, ಗೊಬ್ಬರದ ಸರಬರಾಜು, ವ್ಯವಸಾಯ ಸಾಲ, ನೀರಾವರಿ ಸೌಲಭ್ಯಗಳು ಮತ್ತು ಮಾರುಕಟ್ಟೆ ಸೌಲಭ್ಯಗಳನ್ನು ಒದಗಿಸುವುದು, ಗೃಹ ಮತ್ತು ಸಣ್ಣ ಕೈಗಾರಿಕೆಗಳಿಗೆ ಬೇಕಾದ ಸಾಲವನ್ನೂ ಕಚ್ಚಾ ಸಾಮಗ್ರಿಗಳನ್ನೂ ಉಪಕರಣಗಳನ್ನು ಮಾರುಕಟ್ಟೆ ಸಹಾಯವನ್ನು ಒದಗಿಸುವುದು - ಇವೂ ಅದರಲ್ಲಿ ಸೇರುತ್ತವೆ. ಇವೆಲ್ಲ ಆರ್ಥಿಕಾಭಿವೃದ್ಧಿಯ ಕಾರ್ಯಕ್ರಮಗಳು.

	ಹಳ್ಳಿಯ ಎಲ್ಲ ಬಾಲಕ ಬಾಲಕಿಯರಿಗೂ ವಯಸ್ಕರಿಗೂ ವಿದ್ಯಾಭ್ಯಾಸಸೌಕರ್ಯಗಳನ್ನು ಒದಗಿಸುವುದು, ರೇಡಿಯೋ, ಚಲನಚಿತ್ರ, ಭಾಷಣ ಮತ್ತು ಪ್ರದರ್ಶನಗಳ ಮೂಲಕ ಸಮಾಚಾರ ಮತ್ತ ಸಲಹೆಗಳನ್ನು ಒದಗಿಸುವುದು - ಇವೆಲ್ಲ ಬೌದ್ಧಿಕ ವಿಕಾಸ ಕಾರ್ಯಕ್ರಮಗಳು.

	ಹಳ್ಳಿಗರು ಹತಾಶ ಮನೋಭಾವ, ಮೂಢ ನಂಬಿಕೆಗಳು, ಶತಮಾನಗಳ ಶೋಷಣೆಯಿಂದ ಉಂಟಾಗಿರುವ ನಿರುತ್ಸಾಹ ಮತ್ತು ಭೀತಿ ಇವೆಲ್ಲವನ್ನೂ ಹೋಗಲಾಡಿಸಿಕೊಂಡು ಸರ್ಕಾರದಿಂದ ಪಡೆಯಬಹುದಾದ ಎಲ್ಲ ಸೌಕರ್ಯಗಳನ್ನೂ ಉಪಯೋಗಿಸಿಕೊಂಡು ಸಂಘಟಿತರಾಗಿ ಸ್ವಾವಲಂಬಿಗಳಾಗಿ ತಮ್ಮ ಆರ್ಥಿಕ ಮತ್ತು ಬೌದ್ಧಿಕ ಸಂಪತ್ತನ್ನು ಬೆಳೆಸಿಕೊಳ್ಳಬೇಕೆಂಬ ಉತ್ಸಾಹವನ್ನು ಅವರಲ್ಲಿ ಉಂಟುಮಾಡುವುದು ನೈತಿಕ ಕಾರ್ಯಕ್ರಮದ ಗುರಿ.

	ಸ್ವಾತಂತ್ರ್ಯಗಳಿಸುವ ಮುನ್ನ ಗ್ರಾಮ ಪುನರ್ರಚನೆಯ ಅನೇಕ ಪ್ರಯೋಗಗಳು ನಡೆದಿವೆ. ರವೀಂದ್ರನಾಥ ಠಾಕೂರರು ಶ್ರೀನಿಕೇತನದಲ್ಲಿ ಮಾಡಿದ ಪ್ರಯೋಗ, ದಕ್ಷಿಣ ತಿರುವಾಂಕೂರಿನಲ್ಲಿ 1921ರಲ್ಲಿ ಮಾಡಲಾದ ಮಾರ್ತಾಡಂ ಯೋಜನೆ, ಗುರುಗಾಂವ್ ಪ್ರಯೋಗ (1920), 1932ರಲ್ಲಿ ಬರೋಡದಲ್ಲಿ ಕೈಗೊಂಡ ಗ್ರಾಮ ಪುನರ್ರಚನಾ ಕಾರ್ಯ, 1942ರಲ್ಲಿ ಆರಂಭಿಸಿದ ಸರ್ವೋದಯ ಕಾರ್ಯಕ್ರಮ, ಮದ್ರಾಸಿನ ಫಿರ್ಕಾ ಯೋಜನೆ (1919) ಇವು ಮುಖ್ಯವಾದವು.

	1942ರಲ್ಲಿ ಗಾಂಧಿಯವರು ಸರ್ವೋದಯ ಕಾರ್ಯಕ್ರಮದ ಬಗ್ಗೆ ಹರಿಜನ ಪತ್ರಿಕೆಯಲ್ಲಿ ಬರೆಯುತ್ತ, ತಮ್ಮ ಕಲ್ಪನೆಯ ಹಳ್ಳಿಗಳ ಸ್ವರಾಜ್ಯದಲ್ಲಿ ಹಳ್ಳಿಗಳು ತಮಗೆ ಅವಶ್ಯಕವಾದ ವಸ್ತುಗಳನ್ನು ತಾವೇ ಉತ್ಪಾದಿಸಿ ಸ್ವಯಂಪೂರ್ಣತೆ ಹೊಂದಿ ಹೊರಗಿನಿಂದ ತರಿಸಲೇಬೇಕಾದ ಪದಾರ್ಥಗಳಿಗೆ ಮಾತ್ರ ಹೊರಗಿನವರನ್ನು ಅವಲಂಬಿಸಬೇಕು ಎಂದು ಹೇಳಿದ್ದರು. ಇದರಂತೆ ಪ್ರತಿ ಗ್ರಾಮವೂ ತನಗೆ ಬೇಕಾದ ಆಹಾರಧಾನ್ಯಗಳನ್ನೂ ಬಟ್ಟೆಗೆ ಬೇಕಾದ ಹತ್ತಿಯನ್ನೂ ಬೆಳೆಯಬೇಕು. ದನಕರುಗಳಿಗೆ ಬೇಕಾದ ಮೇವು ಸಾಕಷ್ಟು ದಾಸ್ತಾನು ಇರಬೇಕು. ವಯಸ್ಕರಿಗೆ ಮತ್ತು ಮಕ್ಕಳಿಗೆ ಮನೋರಂಜನೆಯ ಆಟದ ಮೈದಾನದ ಸೌಲಭ್ಯವಿರಬೇಕು. ಪ್ರತಿ ಗ್ರಾಮದಲ್ಲೂ ನಾಟಕ ಮಂದಿರ ಪಾಠಶಾಲೆ, ಸಾರ್ವಜನಿಕರು ಸೇರಲು ಒಂದು ಕಟ್ಟಡ - ಇವು ಇರಬೇಕು. ಕೆರೆ ಅಥವಾ ಬಾವಿಗಳಿಂದ ಶುದ್ಧವಾದ ನೀರು ಸರಬರಾಜು ಆಗಬೇಕು. ಎಲ್ಲ ಕಾರ್ಯಕ್ರಮಗಳಿಗೂ ಸಾಧ್ಯವಾದ ಮಟ್ಟಿಗೆ ಸಹಕಾರ ತತ್ತ್ವದ ಮೇಲೆ ನಡೆಯಬೇಕು. ಇದರಿಂದ ಗ್ರಾಮಗಳಲ್ಲಿ ವ್ಯಕ್ತಿ ಸ್ವಾತಂತ್ರ್ಯದ ಅಡಿಪಾಯದ ಮೇಲೆ ಕಟ್ಟಲಾದ ಪರಿಪೂರ್ಣ ಪ್ರಜಾಪ್ರಭುತ್ವ ಏರ್ಪಡುತ್ತದೆ. ಇದು ಗಾಂಧೀಜೀಯವರ ಸರ್ವೋದಯ ಕಲ್ಪನೆಗೆ ಅನುಗುಣವಾದ ಗ್ರಾಮ ವ್ಯವಸ್ಥೆ. ಗ್ರಾಮಗಳ ಪುನರ್ರಚನೆಯನ್ನು ಗ್ರಾಮಗಳ ಜನರೇ ತಮ್ಮ ಸ್ವಂತ ಶಕ್ತಿಯಿಂದಲೇ ಸಾಧಿಸಬೇಕು. ಎಲ್ಲರಿಗೂ ಅವಶ್ಯಕವಾದ ಆಹಾರ, ಬಟ್ಟೆ, ವೈದ್ಯ ಸಹಾಯ, ಉಚಿತ ವಿದ್ಯಾಭ್ಯಾಸ, ಗೃಹ ಕೈಗಾರಿಕೆಗಳ ಮೂಲಕ ಸ್ವಂತ ಉದ್ಯೋಗ ಕಲ್ಪನೆ, ಪಂಚಾಯತಿಗಳ ರೂಪದಲ್ಲಿ ಗ್ರಾಮ ಸ್ವರಾಜ್ಯ - ಇವು ಸಾಧಿಸಬೇಕು. ಹಳ್ಳಿಗರ ಜೀವನ ಪೂರ್ಣವೂ ಶ್ರೀಮಂತವೂ ಆಗಿ ಅವರು ಪಟ್ಟಣಕ್ಕೆ ವಲಸೆ ಹೋಗುವುದು ತಪ್ಪಬೇಕು. ಇದು ಗಾಂಧಿಯವರ ಅಭಿಪ್ರಾಯ.

	ಸ್ವಾತಂತ್ರ್ಯಪೂರ್ವದ ಈ ಪ್ರಯೋಗಗಳು ಸಾಮಾನ್ಯವಾಗಿ ಕೆಲವು ವ್ಯಕ್ತಿಗಳ ಸಾಹಸ ಮತ್ತು ಮಾನವೀಯತೆಯ ಪ್ರತೀಕಗಳಾಗಿದ್ದವು. ಇವಕ್ಕೆ ಸರ್ಕಾರದ ಉತ್ತೇಜನವಾಗಲಿ, ಹಣ ಸಹಾಯವಾಗಲಿ ಸಾಕಷ್ಟು ದೊರೆಯುತ್ತಿರಲಿಲ್ಲ. ಇವು ವ್ಯಾಪಕವಾಗಿರಲಿಲ್ಲ. ಈ ಕೆಲಸಕ್ಕೆ ಅಗತ್ಯವಾದ ಕಾರ್ಯಕರ್ತರೂ ಸಾಕಷ್ಟು ಸಂಖ್ಯೆಯಲ್ಲಿ ಇರಲಿಲ್ಲ. ಅನೇಕರಿಗೆ ತರಬೇತಿ ಇರಲಿಲ್ಲ. ಅವರಿಗೆ ಸ್ಥಳೀಯ ಸಮಸ್ಯೆಗಳ ಮತ್ತು ಸ್ಥಿತಿಗತಿಗಳ ಅರಿವು ಇಲ್ಲದಿದ್ದುದರಿಂದ ಅವರು ಅನೇಕ ವೇಳೆ ಹಳ್ಳಿಗರ ವಿಶ್ವಾಸವನ್ನು ಪಡೆಯಲಾಗಲಿಲ್ಲ. ಸರ್ಕಾರದ ಇಲಾಖೆಗಳು ಒಂದು ಸಮಗ್ರ ಯೋಜನೆ ಹೊಂದಿರಲಿಲ್ಲ. ಸರ್ಕಾರದ ನೆರವನ್ನು ಅವಲಂಬಿಸಿದ್ದ ಅನೇಕ ಕಾರ್ಯಕ್ರಮಗಳಿಗೆ ಸರ್ಕಾರದ ಹಣ ಸಹಾಯ ಸಾಕಷ್ಟು ಇರಲಿಲ್ಲ. ಒಟ್ಟಿನಲ್ಲಿ ಹಳ್ಳಿಗರ ಉತ್ಸಾಹವನ್ನು ಹೆಚ್ಚಿಸಿ ಹಳ್ಳಿಗರೇ ಮುಂದಾಗಿ ಬಂದು ಗ್ರಾಮ ಪುನರ್ರಚನೆಯ ಕಾರ್ಯ ಕೈಗೊಳ್ಳುವ ಉತ್ಸಾಹ ತಳೆಯುವಂತೆ ಮಾಡುವ ಒಂದು ನಿರ್ದಿಷ್ಟವಾದ ಆಕರ್ಷಕವಾದ ಗುರಿ ಇರಲಿಲ್ಲ.

	ಸ್ವಾತಂತ್ರ್ಯದ ಅನಂತರ ಜಾರಿಗೆ ತರಲಾದ ಎಟಾವ ಗ್ರಾಮ ಪುನರ್ರಚನಾ ಯೋಜನೆ ಉಲ್ಲೇಖಾರ್ಹವಾದದ್ದು. ಇದು ಉತ್ತರ ಪ್ರದೇಶದಲ್ಲಿ 64 ಗ್ರಾಮಗಳಿಗೆ ಅನ್ವಯಿಸುವಂತೆ ಆರಂಭವಾಗಿ 3 ವರ್ಷಗಳಲ್ಲಿ 300 ಗ್ರಾಮಗಳಿಗೆ ಹಬ್ಬಿತು. ಮುಂದೆ ಭಾರತದ ಗ್ರಾಮಗಳ ಪುನರ್ರಚನೆಯ ವ್ಯಾಪಕ ಯೋಜನೆಯಾಗಿ ಜಾರಿಗೆ ಬಂದ ಸಾಮುದಾಯಿಕ ಅಭಿವೃದ್ಧಿ ಮತ್ತು ರಾಷ್ಟ್ರೀಯ ವಿಸ್ತರಣ ಯೋಜನೆಗೆ ಇದು ಮಾದರಿಯಾಯಿತು. ಜನರ ಮತ್ತು ಸರ್ಕಾರದ ಸಹಕಾರದಿಂದ ಒಂದು ಸಂಯೋಜಿತ ಗ್ರಾಮ ಪುನರ್ರಚನೆಯನ್ನು ಸಾಧಿಸುವುದು ಈ ಯೋಜನೆಯ ಮುಖ್ಯ ಗುರಿ. ಈ ಯೋಜನೆಯ ಮುಖ್ಯ ಅಂಶಗಳು : 1 ಸುಧಾರಿತ ಬೀಜಗಳ ರಾಸಾಯನಿಕ ಮತ್ತು ಹಸಿರು ಗೊಬ್ಬರದ ಬಳಕೆ, ಸಸ್ಯ ಸಂರಕ್ಷಣೆ, ನೀರಾವರಿ ಸೌಲಭ್ಯ, ಸುಧಾರಿತ ವ್ಯವಸಾಯ ಕ್ರಮವನ್ನು ಅನುಸರಿಸುವ ಮೂಲಕ ವ್ಯವಸಾಯ ಉತ್ಪನ್ನದ ಹೆಚ್ಚಳದ ಸಾಧನೆ, 2 ಪಶುಸಂಗೋಪನೆ, 3 ಸಹಕಾರದ ಮೂಲಕ ಉತ್ಪಾದನ ಸಾಲ ಮತ್ತು ಸೇವಾ ಸೌಲಭ್ಯ, ಮಾರುಕಟ್ಟಡ ಸೌಲಭ್ಯ ಮತ್ತು ವ್ಯವಸಾಯಗಾರರಿಗೆ ಬೇಕಾದ ಅವಶ್ಯ ಸಾಮಗ್ರಿಗಳ ಸರಬರಾಜು, 4 ವೈದ್ಯ ವಸತಿ ಸೌಕರ್ಯ, ಗ್ರಾಮ ನಿರ್ಮಲೀಕರಣ, ಅಂಟುರೋಗಗಳ ನಿಯಂತ್ರಣ ಮತ್ತು ನಿವಾರಣೆ, ರಸ್ತೆಗಳ ಅಭಿವೃದ್ಧಿ, ಕುಡಿಯುವ ನೀರಿನ ಪೂರೈಕೆ, ವಯಸ್ಕರ ಶಿಕ್ಷಣ, ಶೈಕ್ಷಣಿಕ ಪ್ರವಾಸ, ವಾಚನಾಲಯಗಳ ಸ್ಥಾಪನೆ, ಪ್ರಾತ್ಯಕ್ಷಿಕೆಗಳ ಮೂಲಕ ಸಾಮಾಜಿಕ ಶಿಕ್ಷಣ.

	ಹಳ್ಳಿಗಳ ಆರ್ಥಿಕ ಮತ್ತು ಸಾಮಾಜಿಕ ಪರಿವರ್ತನೆಯನ್ನು ಸಾಧಿಸಲು ಸಾಮುದಾಯಿಕ ಅಭಿವೃದ್ಧಿ ಯೋಜನೆ ಒಂದು ಸಾಧನ. ಇದನ್ನು ಕಾರ್ಯಗತಗೊಳಿಸಲು ರಾಷ್ಟ್ರೀಯ ವಿಸ್ತರಣೆ ಮತ್ತು ಸಮಾಜ ವಿಕಾಸ ಸೇವೆಗಳ ಸ್ಥಾಪನೆಯಾಯಿತು. ಸಾಮುದಾಯಿಕ ಅಭಿವೃದ್ಧಿ ಯೋಜನೆಗಳು ಭಾರತದ ಹಳ್ಳಿಗಳ ಪ್ರಕೃತ ಸ್ಥಿತಿಗತಿಗಳನ್ನು ಗಣನೆಗೆ ತೆಗೆದುಕೊಂಡು ರೂಪಿತವಾಗಿವೆ.

	ಹಳ್ಳಿಯ ಜನಗಳಿಗೆ ಅವಶ್ಯಕವಾದ ಆಹಾರ, ಬಟ್ಟೆ, ವಸತಿ ಮತ್ತು ಆರೋಗ್ಯ ಸೌಲಭ್ಯಗಳನ್ನು ಒದಗಿಸುವುದರ ಜೊತೆಗೆ ಮುಖ್ಯವಾಗಿ ಹಳ್ಳಿಗರ ಮನೋಭಾವದಲ್ಲಿ ಕ್ರಾಂತಿಕಾರಕ ಬದಲಾವಣೆಯನ್ನು ಉಂಟುಮಾಡುವುದು ಸಾಮುದಾಯಿಕ ಅಭಿವೃದ್ಧಿ ಯೋಜನೆಯ ಉದ್ದೇಶ.

	ಪ್ರತಿ ಸಾಮುದಾಯಿಕ ಅಭಿವೃದ್ಧಿ ಕೇಂದ್ರದಲ್ಲೂ ವ್ಯವಸಾಯ, ಪಶುಸಂಗೋಪನೆ, ಸಹಕಾರ ಮತ್ತು ಗೃಹಕೈಗಾರಿಕೆಗಳಲ್ಲಿ ನಿಪುಣರಾದ ಕೆಲಸಗಾರರು ಇರುವರು.  ಇವರು ವ್ಯವಸಾಯ ಮತ್ತು ಗೃಹ ಕೈಗಾರಿಕೆಯ ಅಭಿವೃದ್ಧಿಗೆ ಸಲಹೆ ಮತ್ತು ಸಹಾಯ ನೀಡುವರು. ವ್ಯವಸಾಯಾಭಿವೃದ್ದೀಯ ಮುಖ್ಯ ಕಾರ್ಯಕ್ರಮಗಳು ಇವು : 1 ನೀರಾವರಿ ಸೌಲಭ್ಯಗಳ ಪೂರ್ಣ ಪ್ರಯೋಜನ ಪಡೆಯುವುದು, ನೀರಾವರಿ ವ್ಯವಸ್ಥೆಯ ದುರಸ್ತಿ ಮತ್ತು ನೀರಿನ ಉಪಯೋಗದ ಉಳಿತಾಯ, ಒಂದಕ್ಕಿಂತ ಹೆಚ್ಚು ಬೆಳೆ ಬೆಳೆಯುವ ಕಾರ್ಯಕ್ರಮವನ್ನು ಅಧಿಕ ಜಮೀನಿಗೆ ವಿಸ್ತರಿಸುವುದು, ಹೆಚ್ಚು ಇಳುವರಿ ಕೊಡುವ ಬೀಜದ ಉತ್ಪಾದನೆಯನ್ನು ಹೆಚ್ಚಿಸಿ ಎಲ್ಲ ಬೇಸಾಯಗಾರರಿಗೂ ಸರಬರಾಜು ಮಾಡುವುದು, ಗೊಬ್ಬರವನ್ನು ಒದಗಿಸುವುದು, ಮಣ್ಣಿನ ಸಂರಕ್ಷಣೆ, ಜಮೀನನ್ನು ವ್ಯವಸಾಯಕ್ಕೆ ಯೋಗ್ಯವಾಗಿ ಮಾಡುವುದು, ಹಣ್ಣು ತರಕಾರಿ ಬೆಳೆಯುವುದು, ಮೀನುಗಾರಿಕೆಯನ್ನು ಅಭಿವೃದ್ಧಿಪಡಿಸುವುದು ಮತ್ತು ಹೊಸದಾಗಿ ಸಣ್ಣ ನೀರಾವರಿ ಕಾರ್ಯಗಳ ಯೋಜನೆಯನ್ನು ರೂಪಿಸುವುದು. 2 ಹೊಸದಾಗಿ ಸಹಕಾರ ಸಂಘಗಳನ್ನು ಸ್ಥಾಪಿಸುವುದು ಮತ್ತು ಈಗಿರುವ ಸಹಕಾರ ಸಂಘಗಳನ್ನು ಬಲಪಡಿಸಿ ಗ್ರಾಮದ ಪ್ರತಿ ಕುಟುಂಬವನ್ನು ಸಹಕಾರದ ವ್ಯಾಪ್ತಿಗೆ ಒಳಪಡಿಸುವುದು. 3 ಅನುಭೋಗಿ ಸರಕಿನ ಸರಬರಾಜು ಮತ್ತು ಅವಶ್ಯಕ ಸೇವೆಯನ್ನು ಅಧಿಕಗೊಳಿಸುವುದು. ಗೃಹಕೈಗಾರಿಕೆ ಮತ್ತು ಸಣ್ಣ ಮತ್ತು ಮಧ್ಯಮ ಗಾತ್ರಗಳ ಕೈಗಾರಿಕೆಗಳ ಅಭಿವೃದ್ಧಿಯ ಮೂಲಕ ಉದ್ಯೋಗ ಹೆಚ್ಚಿಸುವುದು. 4 ರಸ್ತೆ ನಿರ್ಮಾಣ ಮತ್ತು ಯಂತ್ರಚಾಲಿತ ಸಾಗಣೆಯ ಸೌಕರ್ಯಕ್ಕೆ ಉತ್ತೇಜನ ಕೊಡುವುದು. 5 ಕಡ್ಡಾಯವಾಗಿ ಪ್ರಾಥಮಿಕ ವಿದ್ಯಾಭ್ಯಾಸ ಒದಗಿಸುವುದು, ಮಾಧ್ಯಮಿಕ ಮತ್ತು ಪ್ರೌಢ ವಿದ್ಯಾಭ್ಯಾಸ, ವಾಚನಾಲಯ ಸೌಕರ್ಯಗಳನ್ನು ಏರ್ಪಡಿಸುವುದು. 6 ನಿರ್ಮಲೀಕರಣ ಮತ್ತು ಸಾರ್ವಜನಿಕ ಆರೋಗ್ಯ ಕ್ರಮಗಳು, ವೈದ್ಯಕೀಯ ಸೌಲಭ್ಯ ನೀಡಿಕೆ. 7 ಹೊಸ ನಮೂನೆಯ ಹಳ್ಳಿ ಮನೆ ನಿರ್ಮಾಣಕ್ಕೆ ಉತ್ತೇಜನ, ಹಳ್ಳಿಯವರಿಗೆ ಸಾಮೂಹಿಕ ಮನೋರಂಜನೆ ಕಾರ್ಯಕ್ರಮವನ್ನು ಒದಗಿಸುವುದು. ಸಾಮುದಾಯಿಕ ಯೋಜನೆ 1952ರ ಅಕ್ಟೋಬರ್ 2 ರಂದು ಪ್ರಾಯೋಗಿಕವಾಗಿ ಆರಂಭವಾಯಿತು. ಈಗ ಈ ಯೋಜನೆ ದೇಶಕ್ಕೆಲ್ಲ ವ್ಯಾಪಿಸಿದೆ. ಜನರ ಸ್ವಪ್ರಯತ್ನ ಮತ್ತು ಸ್ವಪ್ರೇರಣೆಯಿಂದ ಹಳ್ಳಿಗಳ ಅಭಿವೃದ್ಧಿಯನ್ನು ಸಾಧಿಸುವುದು ಇದರ ಗುರಿ. ಪ್ರತಿ ಸಾಮುದಾಯಿಕ ಅಭಿವೃದ್ಧಿ ಕೇಂದ್ರಕ್ಕೂ ಸರ್ಕಾರ ನಿರ್ದಿಷ್ಟ ಧನಸಹಾಯ ಮಡುತ್ತದೆ. ಪ್ರತಿ ಕೇಂದ್ರಕ್ಕೂ ಒಬ್ಬ ಕೇಂದ್ರಾಧಿಕಾರಿ ಇರುತ್ತಾನೆ ಮತ್ತು ಅವನ ಕೈಕೆಳಗೆ ಸೇವಾತಂಡ ಇರುತ್ತದೆ. ಕೇಂದ್ರಾಧಿಕಾರಿ ತನ್ನ ಕೇಂದ್ರದಲ್ಲಿ ಎಲ್ಲ ಅಭಿವೃದ್ಧಿ ಕಾರ್ಯಕ್ರಮಗಳ ಯೋಜನೆ ರೂಪಿಸಬೇಕು. ಈಗ ಸಾಮುದಾಯಿಕ ಅಭಿವೃದ್ಧಿಯನ್ನು ಪಂಚಾಯತ್ ರಾಜ್ಯ ಸಂಸ್ಥೆಗಳ ಜೊತೆಗೆ ಸೇರಿಸಿ ಹಳ್ಳಿಗಳ ಪುನರ್ರಚನೆಯನ್ನು ಸಾಧಿಸುವ ಯತ್ನ ನಡೆದಿವೆ. ಸಾಮುದಾಯಿಕ ಅಭಿವೃದ್ಧಿ ಯೋಜನೆಯ ನಿರ್ವಹಣೆಯ ವ್ಯವಸ್ಥೆಯಲ್ಲಿ ಮೂರು ಹಂತಗಳ ಪಂಚಾಯತ್ ರಾಜ್ಯ ಸಂಸ್ಥೆಗಳು - ಹಳ್ಳಿಯ ಹಂತ, ತಾಲ್ಲೂಕು ಹಂತ, ಮತ್ತು ಜಿಲ್ಲಾ ಹಂತ - ಇವೆ.

	ಸಾಮುದಾಯಿಕ ಅಭಿವೃದ್ಧಿಯ ಮೂಲಕ ಗ್ರಾಮ ಪುನರ್ರಚನೆಯ ಕಾರ್ಯದಲ್ಲಿ ಲಭ್ಯವಾಗಿರುವ ಅನುಭವಗಳು ಹಲವು. ಈ ಯೋಜನೆಗಳು ಆರಂಭವಾದಾಗ 10 ವರ್ಷಗಳ ಅವಧಿಯ ಅಂತ್ಯದಲ್ಲಿ ಸ್ಥಳೀಯವಾಗಿ ಸಾಕಷ್ಟು ಸಾಧನ ಸಂಪತ್ತುಗಳು ಸಂಗ್ರಹವಾಗಿ, ಈ ಕೇಂದ್ರಗಳ ಅಭಿವೃದ್ಧಿಗೆ ಸರ್ಕಾರ ಪ್ರತ್ಯೇಕವಾಗಿ ಹಣ ನಿಗದಿ ಮಾಡಬೇಕಿಲ್ಲವೆಂಬ ಆಶಾಭಾವನೆ ಇತ್ತು., ಆದರೆ ವಾಸ್ತವವಾಗಿ ಈ ಯೋಜನೆ ಸರ್ಕಾರದ ಹಣ ಮತ್ತು ನೇತೃತ್ವವನ್ನೇ ಇನ್ನೂ ಅವಲಂಬಿಸಿದೆ. ಈ ಯೋಜನೆ ಸ್ವಯಂಪೂರ್ಣವಾಗದಿದ್ದರೂ ಸಾಮುದಾಯಿಕ ಯೋಜನೆ ಮತ್ತು ಪಂಚಾಯತ್ ರಾಜ್ಯ ಸಂಸ್ಥೆಗಳು ಹಳ್ಳಿಗಳ ಪುನರ್ರಚನೆಯಲ್ಲಿ ಗಣನೀಯವಾದ ಪಾತ್ರ ವಹಿಸಲು ಶಕ್ತವಾಗಿವೆ.

	ವ್ಯವಸಾಯೋತ್ಪಾದನೆಯನ್ನು ಹೆಚ್ಚಿಸುವುದರ ಜೊತೆಗೆ ಸಣ್ಣರೈತರಿಗೂ ಭೂಮಿ ಇಲ್ಲದ ರೈತರಿಗೂ ಇತರ ದುರ್ಬಲ ವರ್ಗದವರ ಅಭಿವೃದ್ಧಿಗೂ ಆದ್ಯತೆ ಕೊಡಲಾಗುತ್ತದೆ. ಗ್ರಾಮ ಪುನರ್ರಚನೆಯಲ್ಲಿ ಸಣ್ಣ ಹಿಡುವಳಿದಾರರಿಗೆ, ವ್ಯವಸಾಯ ಕೂಲಿಕಾರರಿಗೆ ಮತ್ತು ನಿರುದ್ಯೋಗಿಗಳಿಗೆ ಹೆಚ್ಚು ಗಮನ ಕೊಡಬೇಕು. ಜಮೀನಿನ ಮೇಲೆ ಗರಿಷ್ಠ ಮಿತಿಯನ್ನು ವಿಧಿಸಿ ಸಿಗಬಹುದಾದ ಹೆಚ್ಚುವರಿ ಭೂಮಿಯನ್ನು ಭೂವಿಹೀನರಿಗೆ ಹಂಚಿಕೆ ಮಾಡಲಾಗುತ್ತದೆ. ಸಣ್ಣ ರೈತರ ಅಭಿವೃದ್ಧಿ ಸಂಸ್ಥೆಯ ಮೂಲಕ ಸಣ್ಣ ರೈತರಿಗೆ ಅಗತ್ಯವಾದ, ಹೆಚ್ಚು ಇಳುವರಿಯ ಬೀಜ, ಗೊಬ್ಬರ, ಉದ್ದರಿ, ಮಾರುಕಟ್ಟೆ ಸೌಲಭ್ಯ - ಇವೆಲ್ಲವನ್ನೂ ಒದಗಿಸಲಾಗುತ್ತದೆ. ಮುಖ್ಯವಾಗಿ ವ್ಯವಸಾಯದ ಆಧುನೀಕರಣ, ಗೃಹ ಮತ್ತು ಸಣ್ಣ ಕೈಗಾರಿಕೆ ಇವುಗಳ ಮೂಲಕ ನಿರುದ್ಯೋಗ ಸಮಸ್ಯೆಯನ್ನು ನಿವಾರಿಸಿ ಪಂಚಾಯತಿ ರಾಜ್ಯಗಳ ಮೂಲಕ ಗ್ರಾಮ ಸ್ವರಾಜ್ಯವನ್ನು ಸ್ಥಾಪಿಸುವುದು ಉದ್ದೇಶ.							(ಎಸ್.ಎಂ.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ